1ಓ ಕರ್ತನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ವಿಜ್ಞಾಪನೆಗಳಿಗೆ ಕಿವಿ ಗೊಡು; ನಿನ್ನ ನಂಬಿಗಸ್ತಿಕೆಯಲ್ಲಿಯೂ ನೀತಿಯಲ್ಲಿಯೂ ನನಗೆ ಉತ್ತರಕೊಡು.
2ನಿನ್ನ ಸೇವಕನನ್ನು ನ್ಯಾಯವಿಚಾರಣೆಗೆ ಗುರಿಮಾಡಬೇಡ; ಜೀವಿತರಲ್ಲಿ ಒಬ್ಬನಾದರೂ ನಿನ್ನ ಮುಂದೆ ನೀತಿವಂತನಾಗುವದಿಲ್ಲ.
3ಶತ್ರುವು ನನ್ನ ಪ್ರಾಣವನ್ನು ಹಿಂಸಿಸಿ ನನ್ನ ಜೀವವನ್ನು ನೆಲಕ್ಕೆ ಜಜ್ಜಿ ಬಹುಕಾಲದ ಹಿಂದೆ ಸತ್ತವರ ಹಾಗೆ, ಕತ್ತಲೆಯಲ್ಲಿ ನಾನು ವಾಸಿಸುವಂತೆ ಮಾಡಿದ್ದಾನೆ.
4ನನ್ನ ಆತ್ಮವು ನನ್ನಲ್ಲಿ ಕುಂದಿಹೋಗಿದೆ; ನನ್ನೊಳಗೆ ನನ್ನ ಹೃದಯವು ಹಾಳಾಗಿದೆ.
5ಪೂರ್ವಕಾಲದ ದಿವಸಗಳನ್ನು ಜ್ಞಾಪಕಮಾಡಿಕೊಂಡು ನಿನ್ನ ಎಲ್ಲಾ ಕ್ರಿಯೆಗಳಲ್ಲಿ ಧ್ಯಾನಮಾಡಿ, ನಿನ್ನ ಕೈಗಳ ಕೆಲಸವನ್ನು ಆಲೋಚಿಸುತ್ತೇನೆ.

6ನನ್ನ ಕೈಗಳನ್ನು ನಿನ್ನ ಕಡೆಗೆ ಚಾಚುತ್ತೇನೆ; ನನ್ನ ಪ್ರಾಣವು ದಾಹಗೊಂಡ ಭೂಮಿಯ ಹಾಗೆ ನಿನಗಾಗಿ ದಾಹಗೊಂಡಿದೆ.
7ಓ ಕರ್ತನೇ, ನನಗೆ ಬೇಗನೆ ಉತ್ತರಕೊಡು; ನನ್ನ ಪ್ರಾಣವು ಕುಂದಿಹೋಗಿದೆ; ನಾನು ಕುಣಿಯಲ್ಲಿ ಇಳಿಯುವವರಿಗೆ ಸಮಾನವಾಗದ ಹಾಗೆ ನಿನ್ನ ಮುಖ ವನ್ನು ನನಗೆ ಮರೆಮಾಡಬೇಡ.
8ಹೊತ್ತಾರೆಯಲ್ಲಿ ನಿನ್ನ ಪ್ರೀತಿಕರುಣೆಯನ್ನು ನಾನು ಕೇಳುವಂತೆ ಮಾಡು; ನಿನ್ನಲ್ಲಿ ಭರವಸವಿಟ್ಟಿದ್ದೇನೆ; ನಾನು ಹೋಗಬೇಕಾದ ಮಾರ್ಗವನ್ನು ನನಗೆ ತಿಳಿಯಪಡಿಸು; ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ.
9ಓ ಕರ್ತನೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸು; ನಾನು ಅಡಗಿಕೊಳ್ಳು ವಂತೆ ನಿನ್ನ ಬಳಿಗೆ ಓಡುತ್ತೇನೆ.
10ನಿನ್ನ ಚಿತ್ತದಂತೆ ಮಾಡುವದಕ್ಕೆ ನನಗೆ ಬೋಧಿಸು; ನೀನು ನನ್ನ ದೇವರು; ಒಳ್ಳೇದಾಗಿರುವ ನಿನ್ನ ಆತ್ಮವು ನನ್ನನ್ನು ನೆಟ್ಟನೆಯ ಭೂಮಿಯಲ್ಲಿ ನಡಿಸಲಿ.

11ಓ ಕರ್ತನೇ, ನಿನ್ನ ಹೆಸ ರಿನ ನಿಮಿತ್ತ ನನ್ನನ್ನು ಬದುಕಿಸಿ ನಿನ್ನ ನೀತಿಗನುಸಾರ ವಾಗಿ ನನ್ನ ಪ್ರಾಣವನ್ನು ಇಕ್ಕಟ್ಟಿನೊಳಗಿಂದ ಹೊರಗೆ ಬರಮಾಡು.
12ನಿನ್ನ ಕರುಣೆಯಿಂದ ನನ್ನ ಶತ್ರು ಗಳನ್ನು ಸಂಹರಿಸಿ ನನ್ನ ಪ್ರಾಣವನ್ನು ಸಂಕಟ ಪಡಿಸುವವರನ್ನೆಲ್ಲಾ ನಾಶಮಾಡು; ನಾನು ನಿನ್ನ ಸೇವಕನಾಗಿದ್ದೇನೆ.
You have read Psalms 143
12 verses